ಕ್ರೈಂ

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: 9 ಆರೋಪಿಗಳು ಜೈಲು ಪಾಲು

ಮೂಲಕ News Desk | ಪ್ರಕಟಿಸಲಾಗಿದೆ June 11, 2026 June 11, 2026 | 03:04 AM 61 ವೀಕ್ಷಣೆಗಳು

ದಾವಣಗೆರೆ:ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದ 9 ಆರೋಪಿಗಳನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.


ಜೂನ್ 3ರಂದು ನಡೆದಿದ್ದ ಈ ಅಮಾನವೀಯ ಕೃತ್ಯದ ವಿಡಿಯೋವನ್ನು ಆರೋಪಿಗಳು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಬಸವಾಪಟ್ಟಣ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಬಾಲಕ ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದರು.


ಬಂಧಿತ 9 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸುವಂತೆ ಆದೇಶಿಸಿತು.


ಪ್ರಕರಣ ಬೆಳಕಿಗೆ ಬಂದ ಬಳಿಕ ಆರೋಪಿಗಳು ತಮ್ಮ ಮೊಬೈಲ್‌ಗಳಲ್ಲಿ ಇದ್ದ ವಿಡಿಯೋ ಹಾಗೂ ಫೋಟೋಗಳನ್ನು ಅಳಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆ ಡಿಜಿಟಲ್ ಸಾಕ್ಷ್ಯ ಸಂಗ್ರಹ ಹಾಗೂ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ತನಿಖಾ ತಂಡ ಮುಂದಾಗಿದೆ.


ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.