ದಾವಣಗೆರೆ: ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದ ಯುವ ಬಾಡಿ ಬಿಲ್ಡರ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ದುರ್ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಕೆಟಿಜೆ ನಗರದ ನಿವಾಸಿಯಾಗಿದ್ದ ಸುಶೀಲಕುಮಾರ (26) ಮೃತ ದುರ್ದೈವಿ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಸುಶೀಲಕುಮಾರ, ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿಕೊಂಡು ಮನೆಗೆ ಬಂದಿದ್ದರು. ಈ ವೇಳೆ ಮನೆಯ ಪ್ರವೇಶ ದ್ವಾರದ ಬಳಿ ಏಕಾಏಕಿ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಪರೀಕ್ಷಿಸಿದ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಯುವ ವಯಸ್ಸಿನಲ್ಲೇ ಆರೋಗ್ಯವಂತನಾಗಿದ್ದ ಹಾಗೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸುಶೀಲಕುಮಾರ ಅವರ ಅಕಾಲಿಕ ನಿಧನ ಸ್ನೇಹಿತರು ಮತ್ತು ಕ್ರೀಡಾ ವಲಯದವರಲ್ಲಿ ಆಘಾತ ಮೂಡಿಸಿದೆ. ಅವರ ಸಾವಿನಿಂದ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಟಿಜೆ ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.