ಕರ್ನಾಟಕ

ವಿದ್ಯಾರ್ಥಿಗಳು ತಾಂತ್ರಿಕ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಶಾಸಕ ಶ್ರೀ ಅರವಿಂದ ಬೆಲ್ಲದ.

ಮೂಲಕ News Desk | ಪ್ರಕಟಿಸಲಾಗಿದೆ August 11, 2026 August 11, 2026 | 02:56 PM 44 ವೀಕ್ಷಣೆಗಳು

ಧಾರಾವಾಡ -ರಾಯಾಪುರದಲ್ಲಿರುವ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂದು ಐ ಟಿ ಸಿ, ಪ್ರಥಮ ಎಜುಕೇಶನ್ ಫೌಂಡೇಶನ,ಹಾಸ್ಪಿಟಾಲಿಟಿ ಉದ್ಯೋಗ ತರಬೇತಿ ಕೇಂದ್ರ ಹುಬ್ಬಳ್ಳಿ, ಹಾಗೂ ಎಸ್.ಜೆ. ಎಂ.ವಿ ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಯಾಪುರ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.


ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಜಾಬ್ ಮೇಳವನ್ನು ಉದ್ಘಾಟಿಸಿದ ಶ್ರೀ ಅರವಿಂದ ಬೆಲ್ಲದ, ವಿರೋಧ ಪಕ್ಷದ ಉಪನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ -74 ಇವರು ಆಗಮಿಸಿದಂತ ಉದ್ಯೋಗ ಆಕಾಂಕ್ಷಿಗಳನ್ನು ಕುರಿತು ಮಾತನಾಡುತ್ತಾ, ಪ್ರಸ್ತುತ ಸ್ಪರ್ಧಾತ್ಮಕ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯ ಬರಿತ ಜೀವನ ತಮ್ಮದಾಗಲಿ. ಉದ್ಯೋಗವೆಂಬುದು ಕೇವಲ ಜೀವನೋಪಾಯದ ಸಾಧನವಲ್ಲ, ಅದು ಯುವಜನರ ಕನಸುಗಳಿಗೆ ಪ್ರತಿಭೆಗೆ ಮತ್ತು ಸಾಮರ್ಥ್ಯಕ್ಕೆ ಸೂಕ್ತವಾದ ವೇದಿಕೆ. ಪ್ರಸ್ತುತ ಮಹಾಂತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಉದ್ಯೋಗ ಮೇಳ ಹಲವಾರು ಉದ್ಯೋಗಾವಕಾಶಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದರ ಜೊತೆಗೆ, ನಮ್ಮ ಯುವಜನರ ಕೌಶಲ್ಯ ಮತ್ತು ಪ್ರತಿಭೆಯನ್ನು ಗುರುತಿಸುವ ಮಹತ್ವದ ವೇದಿಕೆಯಾಗಿದೆ ಎಂದರು. ಜ್ಞಾನ ನಮ್ಮ ಶಕ್ತಿ, ಕೌಶಲ್ಯ ನಮ್ಮ ಸಾಮರ್ಥ್ಯ, ಅವಕಾಶ ನಮ್ಮ ಯಶಸ್ಸಿನ ಮೆಟ್ಟಿಲು ಎನ್ನುತ್ತಾ ಇಂತಹ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


 ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿಸಿ ಲಿಮಿಟೆಡನ ಕಾರ್ಯಕ್ರಮ ಅಧಿಕಾರಿಗಳಾದಂತ ಶ್ರೀ ಮನೋಜ್ ಅವರು ಪ್ರಸ್ತುತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯವು ಅತ್ಯಂತ ಅವಶ್ಯಕ. ಇಂತಹ ಉದ್ಯೋಗ ಮೇಳಗಳು ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿ ಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕಾರ್ಯಕ್ರಮ. ಇಂತಹ ಜಾಬ್ ಮೇಳದಲ್ಲಿ ಭಾಗವಹಿಸುವ ಮೂಲಕ ತಜ್ಞರಿಂದ ಉದ್ಯೋಗ ತರಬೇತಿ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿ ಯೋಜನೆ ಕುರಿತು ಸಲಹೆ ಪಡೆಯಿರಿ. ಇಂತಹ ಉದ್ಯೋಗ ಮೇಳಗಳು ತಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸುವತ್ತವೆ ಎನ್ನುತ್ತಾ ಐಟಿಸಿ ಯೋಜನೆಗಳ ಕುರಿತು ವಿವರಿಸಿದರು. 

 ಅಧ್ಯಕ್ಷತೆ ವಹಿಸಿದ್ದ ಮಹಾಂತ ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ. ಪುಷ್ಪಾ ಬಸನಗೌಡರವರು ಮಾತನಾಡುತ್ತಾ, ಉದ್ಯೋಗಾಕಾಂಕ್ಷಿಗಳು ಇಂತಹ ಸುವರ್ಣ ಅವಕಾಶಗಳ ಸದುಪಯೋಗಪಡಿಸಿಕೊಳ್ಳಿ. ನಿಮ್ಮ ಕನಸುಗಳು ಗರಿಗೆದರಲು ಇಂತಹ ಉದ್ಯೋಗ ಮೇಳಗಳು ಅವಕಾಶ ಕಲ್ಪಿಸುತ್ತವೆ. ಉದ್ಯೋಗದಾತರೇ ನಿಮ್ಮ ಮನೆ ಬಾಗಿಲಿಗೆ ಬಂದಾಗ ಅಂತಹ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದರ ಜೊತೆಗೆ ಭವಿಷ್ಯವನ್ನು ರೂಪಿಸಿಕೊಳ್ಳಿ. ಶಿಕ್ಷಣದ ಜೊತೆಗೆ  ಉತ್ತಮ ಕೌಶಲ್ಯ ರೂಡಿಸಿಕೊಳ್ಳಿ ಎನ್ನುತ್ತಾ ಆಗಮಿಸಿದಂತ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು.

 ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ಆಗಮಿಸಿದಂತ ಶ್ರೀ ಅರವಿಂದ್ ಬೆಲ್ಲದ್, ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರು ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ಇವರನ್ನು ಉದ್ಯೋಗ ಮೇಳದ ಪರವಾಗಿ ಸನ್ಮಾನಿಸಲಾಯಿತು.

 ಕಾರ್ಯಕ್ರಮದ ವೇದಿಕೆಯಲ್ಲಿಶ್ರೀ ವೆಂಕಟರಮಣ ರೆಡ್ಡಿ,ರಾಜ್ಯ ಸಂಯೋಜನಾಧಿಕಾರಿ, ಕರ್ನಾಟಕ, ಶ್ರೀ ಪುನೀತ್ ಕಾರ್ಯಕ್ರಮ ಮುಖ್ಯಸ್ಥರು, ಶ್ರೀ ಬರಮಣ್ಣ ಕ್ಲಸ್ಟರ್ ಲೀಡರ್, ಶ್ರೀ ಮುತ್ತುರಾಜ್ ಆರ್ ಮೈಸೂರ್ ಕ್ಲಸ್ಟರ್ ಲೀಡರ್, ಶ್ರೀಮತಿ ಗೀತಾ ಕುಲಕರ್ಣಿ ಅಸ್ಸಿಸ್ಟಂಟ್ ಕಂಟ್ರೋಲರ್ ಧಾರವಾಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರ  ಇವರು ಉಪಸ್ಥಿತರಿದ್ದರು 

 

 ಆರಂಭದಲ್ಲಿ ಅಂಧ ವಿದ್ಯಾರ್ಥಿ ಶಿವಕುಮಾರ್ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸಂಯೋಜಕರಾದ ಪ್ರೊ. ಜಿ.ಸಿ ಕಡ್ಡಿಪುಡಿ ಆಗಮಿಸಿದಂತ ಸರ್ವರನ್ನು ಸ್ವಾಗತಿಸಿದರು. ಪ್ರಥಮ ಎಜುಕೇಶನ್ ಫೌಂಡೇಶನ್ ಸೆಂಟರ್  ನ ಕೇಂದ್ರ ಮುಖ್ಯಸ್ಥರಾದಂತಹ ಶ್ರೀ ಪ್ರದೀಪ ಉದ್ಯೋಗ ಮೇಳದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಮೇಶ್ ಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಲಕ್ಷ್ಮಿ ಯಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.

 ಕಾರ್ಯಕ್ರಮದಲ್ಲಿ ಐ ಟಿ ಸಿ ಯ ಕಚೇರಿ ಸಿಬ್ಬಂದಿ, 35ಕ್ಕೂ ಹೆಚ್ಚು ಕಂಪನಿಗಳು, 500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, ಮಹಾಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.