ಕರ್ನಾಟಕ

ಪತ್ರಕರ್ತನ ಮೇಲಿನ ಹಲ್ಲೆ: ಸರ್ಕಾರಿ ವೈದ್ಯಾಧಿಕಾರಿ ಅಮಾನತು

ಮೂಲಕ News Desk | ಪ್ರಕಟಿಸಲಾಗಿದೆ August 23, 2026 August 23, 2026 | 02:17 AM 98 ವೀಕ್ಷಣೆಗಳು


ಬೆಂಗಳೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ತಮ್ಮ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆ ಮಾಡಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿತ್ತು. ಆದರೆ, ಅವರು ವರ್ಗಾವಣೆಗೊಂಡ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ಆಗಸ್ಟ್ 4ರಿಂದ ಸೆಪ್ಟೆಂಬರ್ 30ರವರೆಗೆ ರಜೆಯಲ್ಲಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ, ಆಗಸ್ಟ್ 21ರಂದು ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರು ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೋಟೆಲ್‌ನಲ್ಲಿ ತಿಂಡಿ ಸೇವಿಸುತ್ತಿದ್ದ ವೇಳೆ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ಅಲ್ಲಿಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರು ನೀಡಿದ ದೂರಿನ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ತಕ್ಷಣ ಸ್ಪಂದಿಸಿ, ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಿಂದ ವರದಿ ಪಡೆಯಲಾಗಿದ್ದು, ವರದಿಯಲ್ಲಿ ಮೇಲ್ನೋಟಕ್ಕೆ ಆರೋಪದಲ್ಲಿ ಸತ್ಯಾಂಶ ಕಂಡುಬಂದ ಹಿನ್ನೆಲೆಯಲ್ಲಿ ಡಾ. ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಅಮಾನತುಗೊಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಗುರುದತ್ತ ಹಗಡೆ ಅವರು ಅಮಾನತು ಆದೇಶ ಹೊರಡಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡಿರುವುದು ಇದೀಗ ಗಮನ ಸೆಳೆದಿದೆ.